ಕೇಂಬ್ರಿಕ್

ಒತ್ತಾದ ತಟ್ಟು (ರೀಡ್) ಮತ್ತು ಹೊಕ್ಕು ದಾರಗಳಿರುವ ಹಗುರವಾದ ಸಾದಾ ಬಟ್ಟೆ. ಮೊದಲು ಬೆಲ್ಜಿಯಂನಲ್ಲಿರುವ ಕೇಂಬ್ರಿಯದಲ್ಲಿ ತಯಾರಾದ ಲಿನನ್ ಬಟ್ಟೆಗಳಿಗೆ ಈ ಹೆಸರಿತ್ತು. ಈ ಬಟ್ಟೆಯಲ್ಲಿ ಸಾಮಾನ್ಯವಾಗಿ ತಟ್ಟು ಅಂಗುಲಕ್ಕೆ ನೂರು ಮನೆಗಳುಳ್ಳದ್ದು, ಹೊಕ್ಕು ಅಂಗುಲಕ್ಕೆ 80 ಎಳೆಗಳುಳ್ಳದ್ದು ಮತ್ತು ನೂಲು 60ರಿಂದ 80ರದು. ಕೇಂಬ್ರಿಕ್ ಮತ್ತು ಮಸ್ಲಿನ್‍ಗಳಿಗೆ ಬಹುತೇಕ ಸಮಾನ ಗುಣಲಕ್ಷಣಗಳಿವೆ. ಇವನ್ನು ವಿಶೇಷವಾಗಿ ಹೊರ ಅಂಗಿಗಳಿಗೆ ಮತ್ತು ಅಂಥದೇ ಆದ ಉಡುಪುಗಳಿಗೆ ಉಪಯೋಗಿಸುತ್ತಿದ್ದರು. ಫ್ರೆಂಚ್ ಕೇಂಬ್ರಿಕ್ ಬಲು ಹಸನಾದ ಬಟ್ಟೆ. ಇದರಲ್ಲಿ ನೇಯ್ಗೆಯ ತಪ್ಪುಗಳೇ ಇರುವುದಿಲ್ಲ. ಇದನ್ನು ಕಂಠಾಲಂಕಾರ ವಸ್ತುಗಳೇ ಮೊದಲಾದವುಗಳಿಗೆ ಉಪಯೋಗಿಸುತ್ತಾರೆ. ಐರಿಷ್ ಕೇಂಬ್ರಿಕ್ ಲಿನನ್ ಬಟ್ಟೆಯೇ. ಇದನ್ನು ಉಡುಪುಗಳಿಗಾಗಿ ಮತ್ತು ಕರವಸ್ತ್ರಗಳಿಗಾಗಿ ಉಪಯೋಗಿಸುತ್ತಾರೆ. ಒಂದು ವಿಧದ ವಿಶೇಷವಾಗಿ ಒಪ್ಪಗೊಂಡ (ಫಿನಿಷ್ಡ್) ಕೇಂಬ್ರಿಕನ್ನು ಕಿಡ್ ಎಂದು ಕರೆಯುತ್ತಾರೆ. ಇದನ್ನು ಒಳಪದರಕ್ಕೆ (ಲೈನಿಂಗ್) ಉಪಯೋಗಿಸುತ್ತಾರೆ. ಒಪ್ಪಗೊಂಡ ಪ್ರತಿ ವಸ್ತ್ರಕ್ಕೂ ಬಿಗಿತ (ಸ್ಟಿಫ್‍ನೆಸ್), ನುಣುಪು, ಮಂಕು, ಹೊಳಪು ಮೊದಲಾದ ಗುಣಗಳ ವೈವಿಧ್ಯ ಉಂಟು.       		
	(ವಿ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ